ಕೌಮುದೀ ಮಹೋತ್ಸವ

ಇದು ಐದು ಅಂಕಗಳ ಸಂಸ್ಕøತನಾಟಕ. ಮಲಯಾಳದಲ್ಲಿ ದೊರಕಿದ ಇದರ ಒಂದೇ ಹಸ್ತಪ್ರತಿಯನ್ನು ಮದ್ರಾಸಿನ ರಾಮಕೃಷ್ಣ ಕವಿ ಮತ್ತು ರಾಮನಾಥಶಾಸ್ತ್ರೀ ಎಂಬ ಸಂಪಾದಕರು 1929ರಲ್ಲಿ ಮೊದಲಿಗೆ ಮುದ್ರಿಸಿದರು. ಸಂಸ್ಕøತ ಸಾಹಿತ್ಯದಲ್ಲಿ ಅನೇಕ ದೃಷ್ಟಿಗಳಿಂದ ಇದಕ್ಕೆ ಹೆಚ್ಚಿನ ಮಹತ್ವವಿದೆ. ಮೊದಲನೆಯದಾಗಿ, ಇದರ ಕರ್ತೃ ಒಬ್ಬ ಕವಯಿತ್ರಿ. ನಾಟಕದಲ್ಲಿ `. . . .ಯಾ ನಿಬದ್ಧಂ' ಎಂಬ ಸ್ಖಲಿತವಾಗಿರುವ ಪಾಠವನ್ನು ಸಂಪಾದಕರು ವಿಜ್ಜಿಕಯಾ ಎಂದು ಊಹಿಸಿದ್ದಾರೆ. ಕ್ರಿ.ಶ.7ನೆಯ ಶತಮಾನದ ಚಾಳುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಸೊಸೆಯೂ ಚಂದ್ರಾದಿತ್ಯನ ರಾಣಿಯೂ ಆದ ವಿಜ್ಜಿಕೆಯೊಬ್ಬಳು ಕರ್ನಾಟಕದ ಇತಿಹಾಸದಲ್ಲಿ ಪ್ರಸಿದ್ಧಳಾಗಿದ್ದಾಳೆ. ದಂಡಿಯನ್ನು ಹಾಸ್ಯಮಾಡುವ ಕವಯಿತ್ರಿ ಈಕೆಯೇ ಇರಬಹುದು. ಮತ್ತೆ ಕೆಲವರು ವಿದ್ವಾಂಸರು ಮೋರಿಕಾ, ಕಿಶೋರಿಕಾ ಇತ್ಯಾದಿ ಬೇರೊಬ್ಬಳೇ ಇರಬೇಕೆನ್ನುತ್ತಾರೆ. ಹೇಗಾದರೂ ನಾಟಕವನ್ನು ಬರೆದವಳು ಹೆಂಗಸೆಂಬುದು ನಿರ್ವಿವಾದ. ಶ್ರೀಮತಿ ಶಕುಂತಲಾ ರಾವ್ ಶಾಸ್ತ್ರೀ ಅವರ ಪ್ರಕಾರ ವಿಜ್ಜಿಕೆ ಬಂಗಾಳಿ ಸ್ತ್ರಿ.

ಎರಡನೆಯದಾಗಿ ಈ ನಾಟಕ ಸಂಸ್ಕøತದ ಕೆಲವೇ ಐತಿಹಾಸಿಕ ನಾಟಕಗಳಲ್ಲಿ ಒಂದಾಗಿದೆ. ಪಾಟಲೀಪುತ್ರದ ರಾಜ ಸುಂದರವರ್ಮನ ಸಾಕುಮಗನೇ ಚಂಡಸೇನ. ಇವನು ತಂದೆಗೆ ತಿರುಗಿಬಿದ್ದು ಲಿಚ್ಛವಿಗಳ ಸೈನ್ಯಸಹಾಯದಿಂದ ಪಾಟಲೀಪುತ್ರವನ್ನು ಮುತ್ತುತ್ತಾನೆ. ಯುದ್ಧದಲ್ಲಿ ಸುಂದರವರ್ಮ ಸಾಯಲು, ರಾಣಿಯರು ಸತಿಯಾಗುತ್ತಾರೆ. ಅವನ ಮಗ ಕಲ್ಯಾಣವರ್ಮ ಕಾಡಿಗೆ ಓಡುತ್ತಾನೆ, ಮಂತ್ರಿ ಮಂತ್ರಗುಪ್ತನೊಂದಿಗೆ. ಈ ಮಂತ್ರಿ ಉಪಾಯದಿಂದ ಅಲ್ಲಿಯ ಶಬರಪುಲಿಂದರನ್ನು ಒಲಿಸಿಕೊಂಡು ಅವರು ದಂಗೆಯೇಳುವಂತೆಯೂ ಅವರನ್ನಡಗಿಸಲೆಂದು ಚಂಡಸೇನ ಹೋದಾಗ ಪಾಟಲೀಪುತ್ರದ ಜನ ದಂಗೆಯೇಳುವಂತೆಯೂ ಏರ್ಪಡಿಸುತ್ತಾನೆ. ಕದನದಲ್ಲಿ ಚಂಡಸೇನ ಸತ್ತು ಅವನ ವಂಶ ನಿರ್ಮೂಲವಾಗುತ್ತದೆ. ಕಲ್ಯಾಣವರ್ಮ ರಾಜನಾಗುತ್ತಾನೆ; ಮಥುರೆಯ ರಾಜಕುಮಾರಿಯಾದ ಕೀರ್ತಿಸೇನೆಯನ್ನು ಮದುವೆಯಾಗುತ್ತಾನೆ. ಇದು ಸಂಕ್ಷೇಪವಾಗಿ ಈ ನಾಟಕದ ಕಥಾವಸ್ತು. 

ಇವೆಲ್ಲ ವಾಸ್ತವವಾದ ಐತಿಹಾಸಿಕ ಘಟನೆಗಳೆಂದೇ ಜಯಸ್ವಾಲ್ ಮುಂತಾದ ಇತಿಹಾಸಜ್ಞರು ಭಾವಿಸುತ್ತಾರೆ. ಚಂಡಸೇನನೆಂದರೆ ಗುಪ್ತರಾಜನಾದ ಮೊದಲನೆಯ ಚಂದ್ರಗುಪ್ತನೆಂದೇ ಅವರು ತಿಳಿದು ಅವನ ಮಗಧ ವಿಜಯವನ್ನು ನಾಟಕ ಚಿತ್ರಿಸುತ್ತದೆಂದು ಹೇಳುತ್ತಾರೆ. ಎಡ್‍ವರ್ಡ್ ಪೈರ್ಸ್ ಎಂಬ ವಿದ್ವಾಂಸ ಸುಂದರವರ್ಮ ಹಾಗೂ ಕಲ್ಯಾಣವರ್ಮರನ್ನು ಮೌಖರಿವಂಶದ ರಾಜರೆಂದು ನಿರೂಪಿಸಿದ್ದಾನೆ. ಆದರೆ ವಿಂಟರ್‍ನಿಟ್ಸ್ ಈ ಸಮನ್ವಯಗಳನ್ನು ಸ್ವೀಕರಿಸದೆ ನಾಟಕಕಥೆ ಅಜ್ಞಾತ ಐತಿಹಾಸಿಕ ವೃತ್ತಾಂತವೆಂದೇ ಪರಿಗಣಿಸುತ್ತಾನೆ. 				 						(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ